Kannada ಉಪಹಾರ

TAVA ROTI & DAHI ALOO ತವಾ ರೋಟಿ ಮತ್ತು ದಹಿ ಆಲೂ

ಸಾಮಾನ್ಯವಾಗಿ ರೋಟಿ, ಕುಲ್ಚಾ, ನಾನ್ ಮುಂತಾದವುಗಳನ್ನು ತಂದೂರಿ ಒಲೆಗಳಲ್ಲಿ ಮಾಡುತ್ತಾರೆ. ಆದರೆ ಮನೆಯಲ್ಲಿ ತಂದೂರಿ ಒಲೆಯಿಂದ ಮಾಡಲು ಸಾಧ್ಯವಿಲ್ಲ! ರೋಟಿಯನ್ನು ತವಾ ಮೇಲೆ ಮಾಡುವ ರೆಸಿಪಿ ಇಲ್ಲಿದೆ!ತವಾ ರೋಟಿ ಮಾಡುವ ವಿಧಾನ:-

ಗೋಧಿ ಹಿಟ್ಟಿಗೆ ಸ್ವಲ್ಪ ಉಪ್ಪು, ಚಿಟಿಕೆ ಬೇಕಿಂಗ್ ಪೌಡರ್, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಬೆಚ್ಚಗೆ ಇರುವ ಹಾಲು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ, ಮೇಲೆ ಸ್ವಲ್ಪ ಎಣ್ಣೆ ಸವರಿ 30 ನಿಮಿಷ ಮುಚ್ಚಿಡಿ.

ನಂತರ ಚಿಕ್ಕ ಚಿಕ್ಕಉಂಡೆಗಳನ್ನು ಮಾಡಿ ಕೊಂಡು ಚಪಾತಿಗಿಂತ ಸ್ವಲ್ಪ ಚಿಕ್ಕದಾಗಿ ಲಟ್ಟಿಸಿ.

ಎರಡು ಬಗೆಯಾಗಿ ಬೇಯಿಸಬಹುದು.

ಒಂದನೆ ವಿಧಾನ:-

   

ಒಲೆಯ ಮೇಲೆ ಹಪ್ಪಳ/ಪುಲ್ಕಾ ಸುಡುವ ಜಾಲರಿ ಇಡಿ. ಲಟ್ಟಿಸಿದ ರೋಟಿಯನ್ನು ಜಾಲರದ ಮೇಲೆ ಹಾಕಿ. ಒಂದು ಭಾಗ ಪೂರ ಬೆಂದ ಮೇಲೆ ಚಿಮುಟದ ಸಹಾಯದಿಂದ ತಿರುವಿ ಹಾಕಿ ಬೇಯಿಸಿ. ಒಲೆಯಿಂದ ತೆಗೆದು ಬೆಣ್ಣೆ ಅಥವಾ ತುಪ್ಪ ಸವರಿ ಸವಿಯಿರಿ.

ಎರಡನೆ ವಿಧಾನ:-

      

ಲಟ್ಟಿಸಿದ ಮೇಲೆ ಭಾಗಕ್ಕೆ ಸ್ವಲ್ಪ ನೀರು ಸವರಿ, ಒಲೆಯ ಮೇಲೆ ಕಾದ ಆಮ್ಲೆಟ್ ತವಾ/ ಕಬ್ಬಿಣದ ತವಾ ಮೇಲೆ ಹಾಕಿ. ಗುಳ್ಳೆಗಳು ಬರಲು ಆರಂಭವಾದಾಗ ಕಾವಲಿಯನ್ನು ಇಕ್ಕಳದ ಸಹಾಯದಿಂದ ತಲೆ ಕೆಳಗು ಮಾಡಿ, ರೋಟಿಯನ್ನು ನೇರವಾಗಿ ಉರಿಯಲ್ಲಿ ಬೇಯಿಸಿ, ನಂತರ ಬೆಣ್ಣೆ ಅಥವಾ ತುಪ್ಪ ಸವರಿ ಸವಿಯಿರಿ.

 

ದಹಿ ಆಲೂ

ಸುಲಭವಾಗಿ ಮಾಡಬಹುದಾದ ರುಚಿಯಾದ ಗ್ರೇವಿ!
ಬೇಬಿ ಆಲೂಗೆಡ್ಡೆಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ, ಸಿಪ್ಪೆ ತೆಗೆದು, ಫೋರ್ಕ್ ನಲ್ಲಿ ಅಲ್ಲಲ್ಲಿ ಚುಚ್ಚಿಡಿ.

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಸಿಪ್ಪೆ ತೆಗೆದ ಆಲೂಗೆಡ್ಡೆ ಹಾಕಿ ಆಲೂಗೆಡ್ಡೆಯ ಮೇಲ್ಬಾಗ ಸ್ವಲ್ಪ ಗರಿ ಗರಿಯಾಗಿ ಆಗುವವರೆಗೆ ಫ್ರೈ ಮಾಡಿ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ ಬಾಡಿಸಿಡಿ.

   

ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಜೀರಿಗೆ, ಅರಿಷಿಣ, 1 ಚಮಚ ಖಾರಾ ಪುಡಿ, 1/2 ಚಮಚ ಗರಂ ಮಸಾಲ, 1/4 ಚಮಚ ಧನಿಯ ಪುಡಿ, 1/8 ಚಮಚ ಸಕ್ಕರೆ, ಉಪ್ಪು ಹಾಕಿ ಸ್ವಲ್ಪ ಬಾಡಿಸಿ, 1 ಬಟ್ಟಲು ಸಿಹಿಯಾದ ಗಟ್ಟಿಯಾದ ಮೊಸರು ಹಾಕಿ ಕುದಿಸಿ.

   

ನಂತರ ಬೇಬಿ ಆಲೂಗೆಡ್ಡೆ ಹಾಕಿ ಕಲೆಸಿ, ಕಡಿಮೆ ಉರಿಯಲ್ಲಿ ಮೊಸರಿನಲ್ಲಿರುವ ಎಣ್ಣೆ ಅಂಶ ಹೊರ ಬರುವವರೆಗೆ ಕುದಿಸಿ, ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ರುಚಿಯಾದ ದಹಿ ಆಲೂ ಸವಿಯಲು ಸಿದ್ಧ!

ರೋಟಿ, ಚಪಾತಿ, ಕುಲ್ಚಾ ಎಲ್ಲದರೊಂದಿಗೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು.

Leave a Reply

Your email address will not be published.