Kannada ಸಾಂಬಾರು ಮತ್ತು ಪಲ್ಯಗಳು

HALU SARU ಹಾಲು ಸಾರು

ಸಾಮಾನ್ಯವಾಗಿ ಹಳ್ಳಿಗಳ ಕಡೆ ಹೆಚ್ಚು ಮಾಡುವ ಸಾರಿನ ವಿಧಾನ! ಬೇಳೆ ಸಾರು ಬೇಸರವಾಗಿದ್ದರೆ ಒಂದು ಬದಲಾವಣೆಗಾಗಿ ಈ ಸಾರು ಮಾಡಿ ನೋಡಿ!

ಇದು ನನ್ನ ಅಮ್ಮ, ಅವರಮ್ಮ ಮಾಡುತ್ತಿದ್ದ ಶೈಲಿ!

ಮಾಡುವ ವಿಧಾನ:-

1/2 ಲೋಟ ಹೆಸರು ಕಾಳು ರಾತ್ರಿ ನೆನೆಸಿಡಿ.

ಬೆಳಿಗ್ಗೆ ಸಣ್ಣಗೆ ಹೆಚ್ಚಿದ 1/2 ಪಡವಲ ಕಾಯಿಯ ಜೊತೆಗೆ ಹಾಕಿ 1 ವಿಷಲ್ ಕೂಗಿಸಿಡಿ.

1 ಇಂಚು ಶುಂಠಿ, 6 ರಿಂದ 8 ಬೆಳ್ಳುಳ್ಳಿ ಎಸಳು, 2 ಹಸಿ ಮೆಣಸಿನಕಾಯಿ, ಕರಿ ಮೆಣಸು 1/4 ಚಮಚ ಸ್ವಲ್ಪ ಎಣ್ಣೆ ಹಾಕಿ ಹುರಿದು, 4 ಚಮಚ ಕಾಯಿ ತುರಿ ಜೊತೆ ನುಣ್ಣಗೆ ರುಬ್ಬಿಡಿ. ಹಸಿ ಮೆಣಸಿನಕಾಯಿ ಮತ್ತು ಕರಿ ಮೆಣಸು ಹಾಕುವುದರಿಂದ ಖಾರಾ ನೋಡಿ ಕೊಂಡು ನಿಮಗೆ ಬೇಕಾಗುವಷ್ಟು ಹಾಕಿ ಕೊಳ್ಳಿ.

ಬೆಂದ ಹೆಸರು ಕಾಳು, ಪಡವಲ ಕಾಯಿಗೆ ರುಬ್ಬಿದ ಮಿಶ್ರಣ, ಉಪ್ಪು ಸೇರಿಸಿ ಕುದಿಯಲು ಇಡಿ. ಬೇಕಾದರೆ ಸ್ವಲ್ಪ ನೀರು ಹಾಕಿ.

ಸಾರು ಚೆನ್ನಾಗಿ ಕುದಿ ಬಂದ ಮೇಲೆ 1 ಲೋಟ ಕಾಯಿಸಿದ ಹಾಲು ಹಾಕಿ ಒಲೆಯಿಂದ ಇಳಿಸಿ.

ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು ಹಾಕಿ ಸಾರಿಗೆ ಸೇರಿಸಿ ಕಲೆಸಿದರೆ ವಿಭಿನ್ನ ರುಚಿಯ ಹಾಲು ಸಾರು ಸಿದ್ಧ!

ಹಾಲು ಹಾಕುವುದರಿಂದ ಈ ಸಾರಿಗೆ ಯಾವುದೇ ಹುಳಿ, ಅರಿಷಿಣ ಸೇರಿಸುವುದಿಲ್ಲ!

ಹೆಸರು ಕಾಳು, ಪಡವಲ ಕಾಯಿ ಬದಲು ನೀವು ಬೇಕಾದರೆ ಹಸಿ ಅಲಸಂದೆ ಕಾಳು/ ತಿಂಗಳುರುಳಿ ಕಾಳು/ ತೊಗರಿ ಕಾಳು ಸಿಕ್ಕರೆ ಹಾಕಿ ಮಾಡಬಹುದು. ರುಚಿ ಇನ್ನೂ ಚೆನ್ನಾಗಿರುತ್ತದೆ.

ಧನ್ಯವಾದಗಳು.

Leave a Reply

Your email address will not be published.